ಎನ್ ಶಾಮೀದ್ ತಾವರಗೇರಾ
ಗ್ರಾಮಗಳು ಹಸಿವಿನಿಂದ ತತ್ತರಿಸುತ್ತಿವೆ. ಕವಿಯ ಕಾವ್ಯವು ಗ್ರಾಮೀಣ ನೋವಿಗೂ ಸ್ಪಂದಿಸಬೇಕು ಎಂದು ಹಿರಿಯ ಗಾಂಧಿವಾದಿ ಹಾಗೂ ರಂಗಕರ್ಮಿ ಪ್ರಸನ್ನ ಅವರು ಸಲಹೆ ನೀಡಿದರು.
ಸ್ಲಂ ಜನಾಂದೋಲನ (ಕರ್ನಾಟಕ) 11ನೇ ವಾರ್ಷಿಕೋತ್ಸವ ಅಂಗವಾಗಿ ‘ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ನಗರ ವಂಚಿತ ಸಮುದಾಯಗಳ ಮುಂದಿನ ಹೆಜ್ಜೆಗಳ ಕುರಿತು’ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ‘ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕವನ ಸಂಕಲನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಕಳೆದ ವರ್ಷದಿಂದ ಭಾರತದ ಹಳ್ಳಿಗಳ ಸ್ಥಿತಿಗತಿ ತುಂಬಾ ಗಂಭೀರವಾಗಿ ಹೋಗಿವೆ. ಆದರೆ ನಗರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಕವಿ ಕಾವ್ಯವು ಹಳ್ಳಿಗಳತ್ತ ಹೋಗಬೇಕು. ಅದಕ್ಕೆ ಈಗ ಕಾಲ ಬಂದಿದೆ. ಈ ಕುರಿತು ಸಾಹಿತ್ಯ ಲೋಕ ಚಿಂತನೆ ನಡೆಸುವ ಮೂಲಕ ತನ್ನ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಬೇಕು ಎಂದರು.
ಮಾನವ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ವೈ.ಜೆ.ರಾಜೇಂದ್ರ ಮಾತನಾಡಿ, ‘ದಿನ ದಿನಕ್ಕೆ ಕೃಷಿ ಕೂಲಿ ಕಾರ್ಮಿಕರ ಹಾಗೂ ರೈತರು ಸಂಕಟದಲ್ಲಿ ಸಿಲುಕುತ್ತಿದ್ದಾರೆ. ಹಳ್ಳಿಗರು ನಗರಕ್ಕೆ ವಲಸೆ ಬರುತ್ತಿದ್ದಾರೆ. ಕೇವಲ ಸಂಘಟನೆಗಳು ಹೋರಾಟ ರೂಪಿಸಲಾಗುವುದಲ್ಲ. ಅದರ ಜೊತೆಗೆ ಕವಿ ಕಾವ್ಯ ಕೂಡ ಸ್ಪಂದಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಕವಿ ಅಲ್ಲಾಗಿರಿರಾಜ್ ಕನಕಗಿರಿ ಮಾತನಾಡಿ, ‘ಈ ಕೃತಿಯ ಕವಿತೆಗಳು ನನ್ನ ಅತೀ ಹೆಚ್ಚು ಕಾಡಿದ ಕವನಗಳು. ಒಂದೊಂದು ಕವಿತೆ ಕೂಡ ಜನ ಸಾಮಾನ್ಯರ ಎದೆಯ ಹಾಡು ಪಾಡಾಗಿವೆ’ ಎಂದರು.
ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಪ್ರಾಧ್ಯಾಪಕ ಪ್ರೊ ಬಾಬು ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು ವೇದಿಕೆ ಮೇಲೆ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ. ಸ್ಲಂ ಜಗತ್ತು ಪತ್ರಿಕೆ ಸಂಪಾದಕ ಅರುಳ್ ಶಲ್ವಾ. ಮತ್ತಿತರರಿದ್ದರು.