ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಬೊಲೆರೋ ವಾಹನ ಕಳ್ಳತನ ಮಾಡಿದ್ದ ಕಳ್ಳನೊಬ್ಬನನ್ನು ಪೊಲೀಸರು ಅದೇ ಗಾಡಿಯಲ್ಲಿ ಕರೆದುಕೊಂಡು ಹೋಗುವಾಗ ಕಳ್ಳನು ಸಿನಿಮಾ ರೀತಿಯಲ್ಲಿ ಪರಾರಿಯಾದ ಘಟನೆ ತಾವರಗೇರಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ಸಿಂಧನೂರಿನ ಸಂತೋಷ್ ಕಾಮಣ್ಣ ಉಪ್ಪಾರ್ ಎಂದು ಗುರುತಿಸಲಾಗಿದ್ದು, ಪರಾರಿಯಾದ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಸಾರ್ವಜನಿಕರು ಸಹಕರಿಸಿ ಎಲ್ಲಾದರೂ ಕಂಡು ಬಂದಲ್ಲಿ ತಾವರಗೇರಾ ಠಾಣೆಗೆ ಮಾಹಿತಿ ನೀಡುವಂತೆ ಪಿಎಸ್ಐ ಸುಜಾತ ನಾಯಕ್ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:- ಬಾಗಲಕೋಟ್ ಜಿಲ್ಲೆಯ ಮುಧೋಳದಲ್ಲಿ, ಬೊಲೆರೋ ವಾಹನ ಕಳ್ಳತನ ವಾಗಿದ್ದಕ್ಕೆ ಪ್ರಕರಣ ದಾಖಲಿಸಿಕೊಂಡ ಅಲ್ಲಿಯ ಪೊಲೀಸರು ಆರೋಪಿಯ ಪತ್ತೆಹಚ್ಚಲು ಸಿಂಧನೂರಿಗೆ ಬಂದಾಗ ಸಂತೋಷ ಎಂಬ ವ್ಯಕ್ತಿ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಮುಧೋಳಗೆ ಅದೇ ಬುಲೆರೋ ವಾಹನದಲ್ಲಿ ಕರೆದುಕೊಂಡು ಬರುವಾಗ ಸಮೀಪದ ಹಂಚಿನಾಳ ಹತ್ತಿರದ ಟೋಲ್ ಗೇಟ್ ಹತ್ತಿರ ಮೂತ್ರ ವಿಸರ್ಜನೆಗೆಂದು ಸುಳ್ಳು ಹೇಳಿ , ಕೆಳಗೆ ಇಳಿದು, ಕಳ್ಳನು ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಪರಾರಿಯಾಗಿದ್ದು ತಕ್ಷಣವೇ ಪೊಲೀಸರು ಹುಡುಕುವ ಪ್ರಯತ್ನ ನಡೆಸಿದರು, ಅವರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ, ಆರೋಪಿಯ ಎಡಗೈ ಮೇಲೆ ರಕ್ಷಿತಾ ಎಂಬ ಹಚ್ಚೆ ಗುರುತು ಇದೆ ಎಂದು ತಿಳಿದುಬಂದಿದೆ.