ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಂತಿ ಹಾಗೂ ಸೌಹಾರ್ದತೆಯಿಂದ ಉರುಸ್ ಅನ್ನು ಆಚರಿಸಬೇಕೆಂದು ತಹಶೀಲ್ದಾರರಾದ ಕೆ ರಾಘವೇಂದ್ರ ರಾವ್ ಅವರು ಹೇಳಿದರು.
ಅವರು ಸ್ಥಳೀಯ ಶಾಮೀದ್ ಅಲಿ ದರ್ಗಾದಲ್ಲಿ ಇದೇ ಜೂನ 5, 6 ಮತ್ತು 7 ರಂದು ನಡೆಯುವ ಉರುಸ್ ನ ಪ್ರಯುಕ್ತ ಗುರುವಾರದಂದು ನಡೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು. ಸ್ಥಳೀಯ ಉರುಸಿಗೆ ಜಿಲ್ಲೆ ಸೇರಿದಂತೆ ಬೇರೆ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಸ್ಥಳೀಯ ಪಟ್ಟಣ ಪಂಚಾಯತ್ ಹಾಗು ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಕಂದಾಯ ಇಲಾಖೆ ಅವರು ಕೂಡ ಸ್ಥಳೀಯ ಸರ್ವ ಸಮಾಜದ ಸಹಕಾರದೊಂದಿಗೆ
ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಿ ಯಶಸ್ವಿಯಾಗಿ ಉರುಸ್ ಅನ್ನು ಆಚರಿಸಬೇಕು ಎಂದು ಹೇಳಿದರು.
ಎಚ್ಚರಿಕೆ:- ಸ್ಥಳೀಯ ಶಾಮೀದ್ ಲಿ ದರ್ಗಾದ ಮುತವಲ್ಲಿಗಳ (ಮುಜವಾರ್), ತಮ್ಮ ವೈಯಕ್ತಿಕ ಜಗಳದಿಂದ ದರ್ಗಾದ ಹೆಸರನ್ನು ಕೆಡಿಸುತ್ತಿದ್ದಾರೆ ಎಂದು ಅಲ್ಲಿ ನೆರೆದಿದ್ದ ಸಾರ್ವಜನಿಕರು ಹೇಳಿದರು ನಂತರ ತಹಶೀಲ್ದಾರರಾದ ಕೆ ರಾಘವೇಂದ್ರ ರಾವ್ ಅವರು, ಈ ಬಗ್ಗೆ ನನಗೆ ಈಗಾಗಲೇ ದೂರುಗಳು ಬಂದಿದ್ದು ದರ್ಗಾದಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ನಿಮ್ಮ ವಿರುದ್ಧ ಕ್ರಮ ಕೈಗೊಂಡು ಪೂಜೆ ಸಲ್ಲಿಸಲು ಬೇರೆಯವರನ್ನು ನೇಮಕ ಮಾಡಲಾಗುವುದೆಂದು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಾಡ ತಹಶೀಲ್ದಾರರಾದ ಶರಣಬಸವ ಕಳ್ಳಿಮಠ, ಪಪಂ ಮುಖ್ಯಾಧಿಕಾರಿ. ನಬಿಸಾಬ್ ಕುಧನ್ ವರ, ಕಂದಾಯ ಇಲಾಖೆಯ ಸೂರ್ಯಕಾಂತ್ ನಾಯಕ್, ನಾಗರಾಜ್, ಫಾರೂಕ್ ಆರೋಗ್ಯ ಇಲಾಖೆಯ ಅನ್ವರ್ ಹಾಗೂ ಸ್ಥಳೀಯ ಮುಖಂಡರಾದ ಬಸನಗೌಡ ಮಾಲಿಪಾಟೀಲ್, ವೀರಭದ್ರಪ್ಪ ನಾಲತವಾಡ, ಸೇರಿದಂತೆ ಇನ್ನಿತರ ಸಮಾಜದ ಮುಖಂಡರು, ಪಪಂ ಸದಸ್ಯರು, ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.