ನಾಗರಾಜ್ ಎಸ್ ಮಡಿವಾಳರ್
ರಾಯಚೂರು : ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ..
ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ಜಾರಿಗೆ ಬರುವ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧ್ಯಕ್ಷ ಡಾ ವಿಶಾಲ್ ಆರ್, ರವರು ಹೊರಡಿಸಿರುವ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಉಲ್ಲೇಖಿತ ಸುತ್ತೋಲೆಯಲ್ಲಿ ತಿಳಿಸಿದ್ದಿಷ್ಟು, 2022 ಮುಖ್ಯ ಪರೀಕ್ಷೆಯನ್ನು ದಿನಾಂಕ:28.03.2022 ರಿಂದ ದಿನಾಂಕ:11.04.2022ವರೆಗೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಕಳೆದ 2018 ಮತ್ತು 2020ರ ಎಸ್.ಎಸ್.ಎಲ್.ಸಿ ಪರೀಕ್ಷೆ ಸಂದರ್ಭದಲ್ಲಿ ಹೊರಡಿಸಿದ ಸುತ್ತೋಲೆ ಪ್ರಕಾರ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ 40 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಶಾಲಾ ಸಂಚಿತ ನಿಧಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ಸೂಚಿಸಲಾಗಿರುತ್ತದೆ. ಸೂಚನೆಗಳನ್ವಯ ಇದುವರೆವಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಇದ್ದಲ್ಲಿ ಅಥವಾ ಈ ಸಾಲಿನಲ್ಲಿ ಹೊಸದಾಗಿ ಪರೀಕ್ಷಾ ಕೇಂದ್ರವಾಗಿ ಗುರುತಿಸಿದ್ದು, ಅಂತಹ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸದೇ ಇದ್ದಲ್ಲಿ 40 ಸಾವಿರ ರೂಪಾಯಿಗಳ ವೆಚ್ಚದ ಮಿತಿಯೊಳಗೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರುಗಳ ಕೊಠಡಿ ಹಾಗೂ ಕಾರಿಡಾರ್ ಸೇರಿ ಒಟ್ಟು 4 ಪಾಯಿಂಟ್ ಒಳಗೊಂಡಂತೆ ಸಿಸಿಟಿವಿ (I DVR, 4 HD CAMERA, 1 MONITOR, CABLEING AND INSTALATION) ಯನ್ನು ಶಾಲೆಯಲ್ಲಿ ಲಭ್ಯವಿರುವ ಶಾಲಾ ಸಂಚಿತ ನಿಧಿಯಿಂದ ಭರಿಸಿಕೊಂಡು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಪರೀಕ್ಷಾ ಕೇಂದ್ರದ ಶಾಲೆಯ ಸಂಚಿತ ನಿಧಿಯಲ್ಲಿ ಅನುದಾನ ಲಭ್ಯವಿಲ್ಲದಿದ್ದಲ್ಲಿ ಆ ಕೇಂದ್ರಕ್ಕೆ ಟ್ಯಾಗ್ ಆನ್ ಮಾಡಲಾಗಿರುವ ಯಾವುದೇ ಶಾಲೆಯ ಸಂಚಿತ ನಿಧಿಯಿಂದ ಖರ್ಚನ್ನು ಭರಿಸುವುದು. ಸಿಸಿಟಿವಿ ಖರೀದಿಯಲ್ಲಿ ಕೆಟಿಪಿಪಿ ಕಾಯ್ದೆ-1999ರನ್ವಯ ಖರೀದಿ ನಿಯಮಗಳನ್ನು ಪಾಲಿಸಲು ಆಯುಕ್ತರು ಸೂಚನೆ ನೀಡಿದ್ದಾರೆ.