ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ದ ಇದೀಗ ಭಾರತದ ಅನೇಕ ಪೋಷಕರನ್ನು ಆತಂಕಕ್ಕೆ ದೂಡಿದೆ. ಭಾರತದ ಅನೇಕ ಭಾರತೀಯರು ಉಕ್ರೇನ್ನಲ್ಲಿ ಸಿಲುಕಿದ್ದು, ಮಕ್ಕಳ ಸ್ಥಿತಿ ಬಗ್ಗೆ ಪೋಷಕರಲ್ಲಿ ಆತಂಕ ವ್ಯಕ್ತವಾಗಿದೆ. ಅದರಲ್ಲಿ ರಾಜ್ಯದ 20ಕ್ಕೂ ಅಧಿಕ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ತೆರಳಿದ ಮಕ್ಕಳು ಸುರಕ್ಷಿತವಾಗಿ ಬರುವಂತೆ ಬೇಡಿಕೊಳ್ಳುತ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಕ್ಕೂ ಪೋಷಕರು ಮನವಿ ಮಾಡಿದ್ದು, ಮಕ್ಕಳ ಕರೆತರಲು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದೆ. ಇನ್ನು ಉಕ್ರೇನ್ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ಕುರಿತು ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕನ್ನಡಿಗರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೂ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸಿದ್ದು, ಅವರೆಲ್ಲಾ ಸುರಕ್ಷಿತವಿರುವುದಾಗಿ ತಮ್ಮ ಪೋಷಕರಿಗೆ ಕರೆ ಮಾಡಿ ತಿಳಿಸಿರುವುದು ತುಸು ನೆಮ್ಮದಿ ನೀಡಿದೆ. ಇನ್ನು ಬಹುತೇಕ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಎಂಬಿಬಿಎಸ್ ಪದವಿ ಅಭ್ಯಾಸ ಮಾಡಲು ತೆರಳಿರುವುದು ವಿಶೇಷವಾಗಿದೆ. ಇನ್ನೂ ರಾಯಚೂರು ಜಿಲ್ಲೆಯ 6 ವಿದ್ಯಾರ್ಥಿಗಳೂ ಉಕ್ರೇನ್ನಲ್ಲಿ ಸಿಲುಕಿದ್ದು ಪಾಲಕರಲ್ಲಿ ಆತಂಕ ಹುಟ್ಟಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮದರಕಲ್ ನಿವಾಸಿ ರುಬಿನಾ, ಮೊದಲ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ.
ದೇವದುರ್ಗದ ಮತ್ತೋರ್ವ ಎಂಬಿಬಿಎಸ್ ವಿದ್ಯಾರ್ಥಿ ಅಭಿಷೇಕ್, ಉಕ್ರೇನ್ ನಲ್ಲಿಎಂ.ಬಿ.ಬಿ.ಎಸ್. ಎರಡನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸೂಗೂರಿನ ಪ್ರಜ್ವಲ್ ಕುಮಾರ್ ಹೂಗಾರ್ ವಿದ್ಯಾರ್ಥಿ. ಉಕ್ರೇನ್ನ ಕಾರ್ಕಿವ್ ನಲ್ಲಿ ಎಂ.ಬಿ.ಬಿ.ಎಸ್. ಮೂರನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಆರ್ ಸೋಮು ಎಂಬಿಬಿಎಸ್ ಮೂರನೆ ವರ್ಷದ ವಿದ್ಯಾರ್ಥಿ ಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.
ಜಿಲ್ಲೆಯ ಮಸ್ಕಿ ಮತ್ತು ಸಿರವಾರ ಪಟ್ಟಣದ ಇಬ್ಬರು ವಿದ್ಯಾರ್ಥಿಗಳು ಸೇರಿ ಒಟ್ಟು ಆರು ಜನ ವಿದ್ಯಾರ್ಥಿಗಳು ಸಿಲುಕೊಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.