ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ಸಮೀಪದ ತಾವರಗೇರಾ ಪಟ್ಟಣದ ಹಿರಿಯ ಪತ್ರಕರ್ತ ಎನ್.ಶಾಮಿದ್ ಅವರು ಪ್ರತಿಷ್ಠಿತ ‘ವೀರ ಕನ್ನಡಿಗ’ ರಾಜ್ಯಮಟ್ಟದ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ..!
ಹೂ ಅಲ್ ಶಿಫಾಹ ವನೌಷಧಿಕ ಆಯುರ್ವೇದ ವೈದ್ಯ ಪರಿಷತ್ ಹಾಗೂ ಜನ ಕಲ್ಯಾಣ ಟ್ರಸ್ಟ್ ಕೊಡಮಾಡುವ ವೀರ ಕನ್ನಡಿಗ ಪ್ರಶಸ್ತಿಯನ್ನು ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಎನ್.ಶಾಮಿದ್ ಅವರಿಗೆ ನೀಡಲು ನಿರ್ಧರಿಸಿದೆ. ರಾಯಚೂರು ಜಿಲ್ಲೆಯ ಲಿಂಗಸ್ಗೂರು ಪಟ್ಟಣದ ಪುರಸಭೆ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 29-12-2021 ರಂದು ಜರಗುವ ಯುವ ರತ್ನ ನಟ ಪುನೀತ್ ರಾಜಕುಮಾರ ಅವರ ಪುಣ್ಯ ಸ್ಮರಣೆ, ವೈದ್ಯ ವಿಜ್ಞಾನ ಪುಸ್ತಕ ಲೋಕಾರ್ಪಣೆ ಮತ್ತು ವೀರ ಕನ್ನಡಿಗ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ, ಸತ್ಕರಿಸಿ ಸನ್ಮಾನಿಸುವುದಾಗಿ ಟ್ರಸ್ಟ್ ಪ್ರಕಟಣೆ ಸ್ಪಷ್ಟಪಡಿಸಿದೆ.
ಪತ್ರಕರ್ತ ಮತ್ತು ಸಮಾಜ ಸೇವಕರು : ಕಳೆದ 20 ವರ್ಷಗಳಿಂದ ವಿಜಯ ಕರ್ನಾಟಕ, ಈ ನಮ್ಮ ಕನ್ನಡ ನಾಡು, ವಿಶ್ವವಾಣಿ ಹಾಗೂ ಉದಯವಾಣಿ ಪತ್ರಿಕೆಗಳು ಸೇರಿದಂತೆ ರಾಜ್ಯಮಟ್ಟದ ಪತ್ರಿಕೆಯಲ್ಲಿ ವರದಿಗಾರರಾಗಿ ಎನ್.ಶಾಮಿದ್ ಸೇವೆ ಸಲ್ಲಿಸಿದ್ದಾರೆ. ಈ ಸದ್ಯ ತಾವರಗೇರಾ ಪಟ್ಟಣದ ಉದಯವಾಣಿ ಪತ್ರಿಕೆ ವರದಿಗಾರರಾಗಿ ಜೊತೆಗೆ ತಮ್ಮ ಸಂಪಾದಕತ್ವದಲ್ಲಿ ಉದಯವಾಹಿನಿ ಎಂಬ ಆನ್ ಲೈನ್ ಪತ್ರಿಕೆ ನಡೆಸುತ್ತಿದ್ದಾರೆ. ಸದಾ ಸಾಮಾಜಿಕ ಕಳಕಳಿ ಹೊಂದಿರುವ ಶಾಮಿದ್ ನಿತ್ಯ ಒಂದಿಲ್ಲೊಂದು ಸಮಾಜ ಸೇವೆ ಸಲ್ಲಿಸುವುದು ಇವರ ಮುಖ್ಯ ಗುಣ. ಇನ್ಫೋಸಿಸ್ (ಸುಧಾಮೂರ್ತಿ) ಸಂಸ್ಥೆಯ ಸಮಾಜ ಸೇವೆಗಳಲ್ಲಿ ಒಂದಾದ ‘ಸೀಳು ತುಟಿ’ ನಿರ್ಮೂಲನೆ ವಿಭಾಗದಲ್ಲಿ ರಾಜ್ಯ ಅಲ್ಲದೆ, ಮಧ್ಯ ಪ್ರದೇಶದ, ರಾಜ್ಯಸ್ಥಾನ, ಗುಜರಾತ್ ರಾಜ್ಯಗಳು ಅಲ್ಲದೆ, ರಾಂಚಿ, ಚತ್ತಿಸಗಡ ಇತ್ಯಾದಿ ಪ್ರದೇಶಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವುದು ಇವರ ಸೇವೆಗೆ ಕನ್ನಡಿ ಎಂದರೆ ತಪ್ಪಾಗಲಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವ ಹಂಬಲದ ಮೂಲಕ ಒಮ್ಮೆ ಸ್ಥಳೀಯ ಸಂಸ್ಥೆಗೆ ಸದಸ್ಯ ಸ್ಥಾನಕ್ಕೆ ಚುನಾಯಿತರಾಗಿ ಸೇವೆ ಕೂಡಾ ಸಲ್ಲಿಸಿದ್ದಾರೆ. ಈಗಾಗಲೇ ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಎನ್.ಶಾಮಿದ್ ಸ್ಥಳೀಯ ಸೇರಿದಂತೆ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿರುವ ಇವರಿಗೆ ವಿಶಿಷ್ಟವಾದ ‘ವೀರ ಕನ್ನಡಿಗ’ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ತಾವರಗೇರಾ ಪಟ್ಟಣ ಸೇರಿದಂತೆ ಕೊಪ್ಪಳ ಜಿಲ್ಲೆಯ ಪತ್ರಕರ್ತ ಮಿತ್ರರು, ಅಪಾರ ಅಭಿಮಾನಿಗಳು, ಕುಟುಂಬಸ್ಥರು ಅಭಿನಂದಿಸಿದ್ದಾರೆ..!!