ವರದಿ : ನಾಗರಾಜ್ ಎಸ್ ಮಡಿವಾಳರ್
ರಾಯಚೂರು : ಜಿಲ್ಲೆಯ ಕುರಕುಂದ ಗ್ರಾಮದಲ್ಲಿ ತಮ್ಮ ನೆಚ್ಚಿನ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹೆಸರಿನಲ್ಲಿ ಅಭಿಮಾನಿಗಳು ದೇವಾಲಯ ನಿರ್ಮಿಸಲಿದ್ದಾರೆ. ಈಗಾಗಲೇ ಗ್ರಾಮದಲ್ಲಿ ನಟನ ಪುತ್ಥಳಿ ಪ್ರತಿಷ್ಟಾಪನೆ ಕೂಡಾ ಮಾಡಲಾಗಿದೆ..!
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದಾ ಗ್ರಾಮವೇ ವಿಶಿಷ್ಟವಾಗಿರುವಂತದ್ದು.
ಇಲ್ಲಿನವರೇ, ತಮಗಿಷ್ಟವಾಗಿರುವ ನೆಚ್ಚಿನ ನಟ ಸುದೀಪ್ ಅವರನ್ನು ಸಾಕ್ಷಾತ್ ದೇವರ ರೂಪದಲ್ಲಿ ಕಾಣುತ್ತಿರುವುದು. ಕೇವಲ ದೇವರ ರೂಪದಲ್ಲಿ ಕಂಡರೆ ಸಾಲದು, ಎಂದು ಮನಗಂಡ ಕುರುಡು ಅಭಿಮಾನಿಗಳು ದೇವರ ಮೂರ್ತಿ ತರಹ ಸುದೀಪ್ ಅವರ ಪುತ್ಥಳಿ ನಿರ್ಮಿಸಿರುವುದಲ್ಲದೆ, ಪುತ್ಥಳಿಯನ್ನ ಶುಭ ದಿನದಲ್ಲಿ ಭಯ-ಭಕ್ತಿ ಪರಾಕಾಷ್ಠೆಯ ಮೂಲಕ ಪ್ರತಿಷ್ಟಾಪನೆ ಕೈಗೊಂಡಿರುವುದು ವಿಶೇಷ. ಮುಂದಿನ ದಿನಗಳಲ್ಲಿ ದೇವಾಲಯ ನಿರ್ಮಾಣದ ಎಲ್ಲಾ ತಯಾರಿ ಕೂಡಾ ಭರ್ಜರಿ ನಡೆದಿದೆ. ಸ್ಯಾಂಡಲ್ ವುಡ್ ಹಲವು ಕನ್ನಡ ಚಿತ್ರರಂಗದ ನಟರು ಬಾಲಿವುಡ್ ಗೆ ಹೆಸರುವಾಸಿಯಾಗಿದ್ದಾರೆ. ಅವರ ಪೈಕಿ ಕಿಚ್ಚ ಸುದೀಪ್ ಸಹ ಮುನ್ನಲೆಯಲ್ಲಿದ್ದಾರೆ. ಮುಖ್ಯವಾಗಿ ಕರುನಾಡಿನಲ್ಲಿ ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿರುವ ಕಿಚ್ಚ ಸುದೀಪ್ ಹೆಸರನಲ್ಲಿ ಅವರ ಅಭಿಮಾನಿಗಳು ಹಲವು ಸಾಮಾಜಿಕ ಕಾರ್ಯಗಳನ್ನು ನಾನಾ ಕಡೆ ಮಾಡುತ್ತಿದ್ದಾರೆ. ಆದ್ರೆ , ಕುರಕುಂದಾ ಗ್ರಾಮದಲ್ಲಿ ಮಾತ್ರ ಸುದೀಪ್ ಅಭಿಮಾನಗಳು ಒಂದು ಹೆಜ್ಜೆ ಮುಂದೆ ಹೋಗಿ ಅವರ ಹೆಸರಿನಲ್ಲಿ ದೇವಾಲಯವನ್ನ ನಿರ್ಮಿಸಲು ಮುಂದಾಗಿರುವುದು ಮಾತ್ರ ರಾಜ್ಯ ಅಲ್ಲದೇ, ದೇಶವನ್ನೇ ಗಮನ ಸೆಳೆಯುತ್ತಿದೆ. ಇನ್ನೂ ಕಟ್ಟಡ ಕಾಮಗಾರಿಗಳು ಮುಗಿದ ಬಳಿಕ ಸ್ವತಃ ಗ್ರಾಮಸ್ಥರು ನಟ ಸುದೀಪ್ ಅವರ ಬಳಿ ತೆರಳಿ ಮನವೊಲಿಸಿ, ಅವರಿಂದಲೇ ಅವರ ದೇವಾಲಯವನ್ನು ಉದ್ಘಾಟನೆ ಮಾಡಿಸುವ ಉದ್ದೇಶ ಹೊಂದಿದ್ದಾರೆ. ಈಗಾಗಲೇ ಗ್ರಾಮಸ್ಥರು ಸುದೀಪ್ ಅವರನ್ನ ಖುದ್ದು ಸಂಪರ್ಕಿಸಿದ್ದಾರೆ. ದೇವಾಲಯ ನಿರ್ಮಾಣಕ್ಕೆ ಸ್ಥಳೀಯರಾದ ಶರಣಬಸವ ಎನ್ನುವರು 1500 ಚದರ ಅಡಿ ನಿವೇಶನವನ್ನು ಉಚಿತವಾಗಿ ನೀಡಿದ್ದಾರೆ. ಅಲ್ಲದೆ, ಗ್ರಾಮಸ್ಥರು 50 ಸಾವಿರ ರೂಪಾಯಿಗಳ ದೇಣಿಗೆ ಕೂಡಾ ನೀಡಿದ್ದಾರೆ. ದೇವಾಲಯದ ಕೌಂಪಂಡ್, ಗ್ಲಾಸ್ ಆಳವಡಿಕೆ, ಗಾರ್ಡನ್ ನಿರ್ಮಾಣ, ಪೇಂಟಿಂಗ್, ಮೇಲ್ಛಾವಣಿ ಸೇರಿದಂತೆ ನಾನಾ ಕಾಮಗಾರಿಗಳನ್ನು ಮುಂದಿನ ತಿಂಗಳೊಳಗಾಗಿ ಪೂರ್ಣಗೊಳಿಸಿ, ದೇವಾಲಯವನ್ನು ನೂತನ ವರ್ಷದಲ್ಲಿ ಉದ್ಘಾಟಿಸುವ ಉದ್ದೇಶ ಹೊಂದಲಾಗಿದೆ ಅಂತಾರೆ, ಗ್ರಾಮದ ತಾ.ಪಂ ಮಾಜಿ ಅಧ್ಯಕ್ಷ ದೇವರಾಜ್ ನಾಯಕ.