ವರದಿ : ನಾಗರಾಜ್ ಎಸ್ ಮಡಿವಾಳರ
ಮುದಗಲ್: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆಯಾಗುವ ಹಿನ್ನೆಲೆಯಲ್ಲಿ ಚುನಾ ವಣೆಯ ಗುಂಗಿನಲ್ಲಿದ್ದ ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳ ಕಾಗಿದೆ. ವರ್ಷಾಂತ್ಯದೊಳಗೆ ಚುನಾವಣೆ ನಡೆಯುತ್ತದೆ ಎಂಬ ಲೆಕ್ಕಾಚಾರ ಹಾಕಿ ಭರ್ಜರಿ ತಾಲೀಮು ನಡೆಸು ತ್ತಿದ್ದ ಆಕಾಂಕ್ಷಿಗಳಲ್ಲಿ ಕ್ಷೇತ್ರ ಬದಲಾವಣೆಯ ತಳಮಳ ಶುರುವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದವು. ಈಗ ಅವುಗಳಿಗೂ ಮುಹೂರ್ತ ನಿಗದಿಯಾಗಬೇಕಿದೆ.
ಆದರೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾ ವಣೆಗೆ ಮಾತ್ರ ಸದ್ಯಕ್ಕೆ ಚುನಾವಣೆ ನಡೆಯುವ ಲಕ್ಷಣ ಕಾಣುತ್ತಿಲ್ಲ. ಅಖಾಡಕ್ಕಿಳಿದು ತೊಡೆತಟ್ಟಲು ಶುರು ಮಾಡಿದ್ದವರೆಲ್ಲರೂ ಮನದಲ್ಲೇ ಗುಣಾಕಾರ, ಭಾಗಾಕಾರ ಹಾಕಲು ಶುರು ಮಾಡಿದ್ದಾರೆ.
ಚುನಾವಣಾ ಆಯೋಗ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಮೀಸಲಾತಿಯನ್ನೂ ಪ್ರಕಟಿಸಿತ್ತು. ಪ್ರಸ್ತುತ ರಾಜ್ಯ ಸರ್ಕಾರ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಸಂಬಂಧ ಪ್ರತ್ಯೇಕ ಆಯೋಗ ರಚನೆ ಮಾಡಲು ನಿರ್ಧರಿಸಿದೆ. ಪ್ರತಿಪಕ್ಷಗಳ ಆಕ್ಷೇಪದ ನಡುವೆಯೂ ಕಾಯ್ದೆಯ ತಿದ್ದುಪಡಿ ಅಂಗೀಕರಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಬೇಕೆಂದೇ ಚುನಾವಣೆಯನ್ನು ತಮಗಿಷ್ಟ ಬಂದಂತೆ ನಡೆಸುವ, ಮುಂದೂಡುವ ಸಲುವಾಗಿ ಇಂತಹ ಕ್ರಮ ಕೈಗೊಂಡಿದೆ ಎಂಬುದು ವಿಪಕ್ಷದ ಮುಖಂಡರ ಆರೋಪ.
‘ಚುನಾವಣಾ ಆಯೋಗದ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿಯಲ್ಲಿ ಆಡಳಿತ ಪಕ್ಷಕ್ಕೆ ನೆರವಾಗುವಂತೆ ಮಾಡಿಲ್ಲ. ಹೀಗಾಗಿ ಕೊರೊನಾ ಕಾರಣ ನೀಡಿ ಚುನಾವಣೆ ಮುಂದೂಡಿದ್ದರು. ಈಗ ಬೇರೆ ವಿಧಿಯಿಲ್ಲದೆ ಪ್ರತ್ಯೇಕ ಆಯೋಗ ರಚನೆ ಮಾಡುವ ನಾಟಕ ಶುರು ಮಾಡಿದ್ದಾರೆ. ಚುನಾವಣೆ ಎದುರಿಸುವ ತಾಕತ್ತು ಇಲ್ಲದ ರಾಜ್ಯ ಸರ್ಕಾರ ಇಂತಹ ಕೀಳುಮಟ್ಟದ ರಾಜಕಾರಣ ಮಾಡಲು ಹೊರಟಿದೆ’ ಎಂದು ಕಾಂಗ್ರೆಸ್ ಮುಖಂಡ ಹೊನ್ನಪ್ಪ ಮೇಟಿ ಆರೋಪಿಸಿದ್ದಾರೆ.
ಆತಂಕ: ಚುನಾವಣಾ ಆಯೋಗ ಪ್ರಕಟಿಸಿದ್ದ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ತಾಲ್ಲೂಕಿನಲ್ಲಿದ್ದ 7 ಜಿಲ್ಲಾ ಪಂಚಾಯಿತಿ ಕ್ಷೇತ್ರ ಇವೆ. ಇನ್ನೊಂದೆಡೆ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯಲ್ಲಿ 5 ಕ್ಷೇತ್ರವನ್ನು ಕಡಿತಗೊಂಡಿತ್ತು. ಒಟ್ಟು 26 ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿತ್ತು. ಜೊತೆಗೆ ಮೀಸಲಾತಿಯನ್ನೂ ನಿಗದಿಪಡಿಸಿತ್ತು.
ಆದರೆ, ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿಗೆ ಬಿಜೆಪಿಯಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ವಿಪಕ್ಷಗಳು ಇದನ್ನು ಸ್ವಾಗತಿಸಿದ್ದವು. ಸದ್ಯ ಈಗ ಮತ್ತೆ ಕ್ಷೇತ್ರ ಪುನರ್ ವಿಂಗಡಣೆ ಕಾರ್ಯ ನಡೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಅಖಾಡಕ್ಕಿಳಿದು ಸಿದ್ಧವಾಗಿರುವ ಅಭ್ಯರ್ಥಿಗಳಲ್ಲಿ ಆತಂಕ ಶುರುವಾಗಿದೆ.
‘ಮೇ ತಿಂಗಳಲ್ಲೇ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಾವಧಿ ಅಂತ್ಯವಾಗಿದೆ. ಈಗ ಅಧಿಕಾರಿಗಳದ್ದೇ ಆಡಳಿತ ನಡೆಯುತ್ತಿದೆ. ಜನಪ್ರತಿನಿಧಿಗಳಿಲ್ಲದ ಸ್ಥಳೀಯ ಸಂಸ್ಥೆಗಳಿಗೆ ಲಗಾಮು ಹಾಕುವವರಿಲ್ಲದೆ ಅಭಿವೃದ್ಧಿ ಮೇಲೆ ಹೊಡೆತ ಬೀಳುವ ಮೊದಲು ಚುನಾವಣೆ ನಡೆಯಬೇಕಿದೆ. ಆದರೆ, ರಾಜಕೀಯ ಮೇಲಾಟದಲ್ಲಿ ಜನರು ಬಡವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಜಲ್ಲಿ ದೂರಿದರು.