ನಾಗರಾಜ್ ಎಸ್ ಮಡಿವಾಳರ್
ಮುದಗಲ್: ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಗ್ರಾಮದ ಡಾ.ಶರಣಪ್ಪ ಆನೆಹೊಸೂರು ಇವರಿಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ 2020 ನೇ ಸಾಲಿನ ಹಂಪಮ್ಮ ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ ಲಭಿಸಿದೆ.
ಲಿಂಗಸುಗೂರು ತಾಲ್ಲೂಕಿನ ಶಾಸನ ಸಂಸ್ಕೃತಿ ಎಂಬ ಸಂಶೋಧನೆ ಕೃತಿಗೆ ಪ್ರಶಸ್ತಿ ಲಭಿಸಿದೆ. ಲಿಂಗಸುಗೂರು ತಾಲ್ಲೂಕಿನ ಶಾಸನಗಳು ತಮ್ಮದೇ ಆದ ವೈಶಿಷ್ಟ್ಯತೆ ಪಡೆದುಕೊಂಡಿವೆ. ಮೌರ್ಯರು, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರು, ಸೇವುಣರು, ವಿಜಯನಗರ ಅರಸರ, ಬಹುಮನಿ ಸುಲ್ತಾನರ, ಕರಡಿಕಲ್ಲು ಕದಂಬರು ಬೌದ್ಧ, ಶೈವ, ಜೈನ, ವೈಷ್ಣವ, ಕೈಸ್ತ ಧರ್ಮಗಳ ಪ್ರತಿಪಾದಕರರಾಗಿದ್ದರು. ಇವರ ಕಾಲದಲ್ಲಿ ಅನೇಕ ದೇವಾಲಯ, ಬಸದಿ, ಚರ್ಚ್ ಜತೆ ಕೋಟೆ ಕೊತ್ತಲಗಳ ನಿರ್ಮಾಣವಾಗಿದ್ದ ಕುರುಹುಗಳನ್ನು ಇಂದಿಗೂ ಅಳಿದುಳಿದಿವೆ. ಶಿವಾಲಯ, ಬಸದಿ, ಚರ್ಚ್, ಮಸೀದಿ, ಗುಮ್ಮಟ, ವೀರಗಲ್ಲು, ಮಹಾಸತಿಗಲ್ಲುಗಳು ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿವೆ. ಇವು ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆಯ ಮೇಲೆ ಲಿಂಗಸುಗೂರು ತಾಲ್ಲೂಕಿನ ಶಾಸನ ಸಂಸ್ಕೃತಿ ಎಂಬ ಸಂಶೋಧನೆ ಕೃತಿ ಬೆಳಕು ಚೆಲ್ಲುತ್ತಿದೆ.
ಸಾಂಸ್ಕೃತಿಕ ಮೌಲ್ಯಗಳಾದ ಪ್ರಾಮಾಣಿಕ, ಸ್ವಾಮಿ ನಿಷ್ಠೆ-ಶಿಸ್ತು, ಆದರ, ಗೌರವ, ಕೃತಜ್ಞತೆ, ಸಹಾನುಭೂತಿ, ಸಹಾಯ, ರೀತಿ, ನೀತಿ, ಐಕ್ಯತೆ, ಬದುಕು-ಧರ್ಮ ಸಮಾಜ-ಪರಿಸರಾದಿಗಳೆಲ್ಲವೂ ಲಿಂಗಸುಗೂರು ತಾಲ್ಲೂಕಿನ ಶಾಸನಗಳಲ್ಲಿ ಕಂಡುಬರುತ್ತಿವೆ. ಈ ಕೃತಿಯಲ್ಲಿ ನಮ್ಮ ಶಾಸನ ಮತ್ತು ಸಂಸ್ಕೃತಿಯ ಸಂಬಂಧವನ್ನು ಗುರುತಿಸುವ ಪ್ರಯತ್ನವಾಗಿದೆ.
ಈ ಪುಸ್ತಕ ಓದುಗರಿಗೆ ಬೆರಗು, ವೈವಿಧ್ಯಮಯ ಕಲೆ, ಸಾಹಿತ್ಯ, ಶಾಸನ ಸಂಸ್ಕೃತಿಗಳ ದರ್ಶನ, ಸಾಹಿತ್ಯದ ಸ್ವಾದದ ಸವಿ ಮುಂತಾದ ವಿಶಿಷ್ಟ ಅನುಭವ ಕೊಡುತ್ತದೆ.
ಡಾ. ಆನೆಹೊಸೂರು ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಗ್ರಾಮದವರು. ಗುಲಬಗರ್ಾ ವಿಶ್ವವಿದ್ಯಾಲಯದಿಂದ ಎಂ.ಎ, ಎಂ.ಫಿಲ್, ಪಿಎಚ್.ಡಿ. ಪದವಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಎಂಜೆಎಂಎಸ್ ಪದವಿ ಪಡೆದುಕೊಂಡಿದ್ದಾರೆ. ‘ನಾಗತಿಹಳ್ಳಿ ಚಂದ್ರಶೇಖರ ಸಣ್ಣಕಥೆಗಳು-ಒಂದು ಅಧ್ಯಯನ’ ಎಂಬ ಎಂ.ಫಿಲ್ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ ಲಭಿಸಿದೆ. ‘ನಾಗತಿಹಳ್ಳಿ ಚಂದ್ರಶೇಖರರ ಸೃಜನಶೀಲ ಸಾಹಿತ್ಯ-ಒಂದು ಅಧ್ಯಯನ’ ಎಂಬ ವಿಷಯದ ಮಹಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.
2012 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದಿಂದ ನೀಡುವ ಜಯತೀರ್ಥ ರಾಜ ಪೂರೋಹಿತ ಕಥಾ ಸ್ಫರ್ಧೆಯಲ್ಲಿ ‘ಹುಡುಗಿಗೆ ಹೇಳಿದ ಕಥೆಗೆ’ ಪ್ರಥಮ ಬಹುಮಾನ ಹಾಗೂ ಚಿನ್ನದ ಪದಕ ಲಭಿಸಿದೆ. ಇವರು ಸಾಗರ್ ಪ್ರಕಾಶ ಸ್ಥಾಪಿಸಿ, 18 ಕೃತಿಗಳು ಪ್ರಕಟಿಸಿದ್ದಾರೆ. ನಾಗರಾಳ ಸಜ್ಜಲಶ್ರೀ ಪದವಿ ಕಾಲೇಜು ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ವಿವಿಧ ಪ್ರತಿಷ್ಠಿತ ಪತ್ರಿಕೆಗಳ ವರದಿಗಾರ ಹಾಗೂ ಜನಪರ ಹೋರಾಟಗಳು ಒಳಗೊಂಡಂತೆ ಬಹುಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಸೃಜನಶೀಲ, ಸಂಶೋಧನೆ ಹಾಗೂ ಪತ್ರಿಕಾ ಬರಹಗಳನ್ನು ನೆಚ್ಚಿಕೊಂಡಿರುವ ಇವರು ಪತ್ರಿಕಾ ಬರಹಗಳ ಅಂಕಣ ಸಾಹಿತ್ಯ ಕೃಷಿ ಮಾಡಿದ್ದಾರೆ.