ವರದಿ ಎನ್ ಶಾಮೀದ್ ತಾವರಗೇರಾ
ಮಸ್ಕಿ: ಮಸ್ಕಿ ಉಪಚುನಾವಣೆ ಮತ ಸಮರವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಘಟಾನುಘಟಿಗಳು ಕ್ಷೇತ್ರದಲ್ಲಿ ಬಿಡು ಬಿಟ್ಟು ಚುನಾವಣೆ ಪ್ರಚಾರಕ್ಕೆ ಬಿಸಿಲಿನ ತಾಪವನ್ನು ಲೆಕ್ಕಿಸದೆ ಪ್ರಚಾರ ಕೈಗೊಂಡಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಬಿಜೆಪಿಯಿಂದ ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಆರ್ ಶಂಕರ್ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರು ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರವಾಗಿ ಪ್ರಚಾರದಲ್ಲಿ ತೊಡಗಿದ್ದು ಇತ್ತ ಕಾಂಗ್ರೆಸ್ ನಲ್ಲಿ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಸ್ ಆರ್ ಪಾಟೀಲ್, ಅಮರೇಗೌಡ ಪಾಟೀಲ್ ಬಯ್ಯಾಪೂರ, ಬಸವರಾಜ ರಾಯರೆಡ್ಡಿ, ಶಿವರಾಜ ತಂಗಡಗಿ ಸೇರಿದಂತೆ ಕಾಂಗ್ರೆಸ್ ನ ಪ್ರಮುಖರು ಅಭ್ಯರ್ಥಿ ಬಸವನಗೌಡ ತುರುವಿಹಾಳ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮಿನಿ ಸಮರ ಎಂದೆನಿಸಿಕೊಂಡಿರುವ ಮಸ್ಕಿ, ಬೆಳಗಾವಿ, ಬಸವಕಲ್ಯಾಣ ಕ್ಷೇತ್ರಗಳ ಮೇಲೆ 2 ಪಕ್ಷಗಳ ಮುಖಂಡರು ಶತಾಯಗತಾಯ ಗೆಲ್ಲಲೇ ಬೇಕೆಂದು ಪಣ ತೊಟ್ಟಿದ್ದಾರೆ. ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದ್ದು ಕ್ಷೇತ್ರದಾದ್ಯಂತ ಮತದಾರರ ಮೇಲೆ ಅಭ್ಯರ್ಥಿಗಳ ಹಣೆಬರಹ ತಿಳಿಯಲಿದೆ.