ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಯಾವುದೇ ಸಾಕ್ಷಿ ಆಧಾರಗಳಿಲ್ಲದೆ ಬಿಜೆಪಿಯವರು ಆರೋಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರಿದರು..!
ತಾವರಗೇರಾ ಪಟ್ಟಣದ ಹೊರವಲಯದಲ್ಲಿ ಮಸ್ಕಿ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ಬಿಜೆಪಿಯವರ ಆರೋಪಕ್ಕೆ ಯಾವುದೇ ತರಹದ ಸಾಕ್ಷಿ ಆಧಾರಗಳಿರುವುದಿಲ್ಲ. ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಸಿಡಿ ಪ್ರಕರಣ ಹಾಗೂ ಮಹಿಳೆ ಕುರಿತಾಗಿ ಯಾವುದೇ ರೀತಿಯಲ್ಲಿ ಮಾತನಾಡುವುದಿಲ್ಲವೆಂದ ಅವರು ತಪ್ಪಿಸ್ಥರಿಗೆ ಶಿಕ್ಷೆಯಾಗಲೇಬೇಕು, ಅವರು ಯಾರೇ ಇರಲಿ ಅವರ ವಿರುದ್ಧ ಸೂಕ್ತ ತನಿಖೆ ಬಳಿಕ ಕಾನೂನು ಕ್ರಮವಾಗಬೇಕೆಂದರು.
ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿದಂತೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲವು ನಿಶ್ಚಿತವೆಂದರು. ಇಂದು ಮಸ್ಕಿ ಕ್ಷೇತ್ರದ 10- 12 ಕಡೆಗಳಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಕೂಡಾ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಸ್ ಆರ್ ಪಾಟೀಲ್, ಆರ್ ದೃವನಾರಾಯಣ್, ಬಸವರಾಜ ರಾಯರೆಡ್ಡಿ, ಶಿವರಾಜ ತಂಗಡಗಿ, ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಮಸ್ಕಿ ಕ್ಷೇತ್ರದ ಅಭ್ಯರ್ಥಿ ಬಸನಗೌಡ ತುರುವಿಹಾಳ ಉಪಸ್ಥಿತರಿದ್ದರು.