ವರದಿ : ನಾಗರಾಜ್ ಎಸ್ ಮಡಿವಾಳರ್
ರಾಯಚೂರು : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯೊಬ್ಬಳಿಗೆ ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಅರ್ಧ ತಾಸು ಅತಿಥಿ ಸಿಇಓ ಸ್ಥಾನ ನೀಡಿ ಗೌರವಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ನಗರದ ಸ್ಟೇಷನ್ ಬಜಾರ್‍ನಲ್ಲಿರುವ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು.ಅನ್ನಪೂರ್ಣ ಅವರನ್ನು 30 ನಿಮಿಷಗಳ ಕಾಲ ಜಿಲ್ಲಾ ಪಂಚಾಯತ್‍ನ ಅತಿಥಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿಸಿ ವಿದ್ಯಾರ್ಥಿನಿಯ ಐಎಎಸ್ ಕನಸಿಗೆ ಪ್ರೇರಣೆ ನೀಡಿದ್ದಾರೆ.
ಸಿಇಓ ಸ್ಥಾನ ಅಲಂಕರಿಸಿ ಮಾತನಾಡಿದ ಅನ್ನಪೂರ್ಣ, ಈ ಸ್ಥಾನದಲ್ಲಿ ಕುಳಿತಿದ್ದು ತುಂಬಾ ಸಂತೋಷ ತಂದಿದೆ. ಮುಖ್ಯವಾಗಿ ಮುಂದಿನ ನನ್ನ ಗುರಿಯನ್ನು ತಲುಪುವುದಕ್ಕೆ ಪ್ರೇರಣೆ ನೀಡಿದೆ, ಐಎಎಸ್ ಅಧಿಕಾರಿಯಾಗುವ ಆಸೆಯನ್ನು ಬಡಿದೆಬ್ಬಿಸಿದೆ, ಮುಂದೆ ಐಎಎಸ್ ಅಧಿಕಾರಿಯಾದಲ್ಲೀ, ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡುವೆ ಎಂದು ತಿಳಿಸಿದಳು.
ಒಟ್ಟಿನಲ್ಲಿ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳನ್ನು ಐಎಎಸ್ ಅಧಿಕಾರಿಯ ಕುರ್ಚಿಗೆ ಕೂರಿಸಿ, ಆ ಮೂಲಕ ವಿದ್ಯಾರ್ಥಿಗಳ ಉನ್ನತ ವ್ಯಾಸಾಂಗಕ್ಕೆ ಪ್ರೇರಣೆ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖ್ ತನ್ವೀರ್ ಅಸಿಫ್ ಮಾತನಾಡಿ, ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲಿಯೂ ತನ್ನ ಛಾಪು ಮೂಡಿಸುತ್ತಿದ್ದಾರೆ, ಸಮಾಜದಲ್ಲಿ ಅವರಿಗೆ ಪುರುಷರಿಗೆ ಸಮಾನ ಅವಕಾಶಗಳು ದೊರೆಯುತ್ತಿದೆ, ಉತ್ತಮ ಸಮಾಜ ನಿರ್ಮಾಣದಲ್ಲಿ ಹೆಣ್ಣಿನ ಪಾತ್ರ ಅತ್ಯಂತ ಪ್ರಮುಖವಾದದ್ದು, ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಅಧ್ಯಯನ ಮಾಡಿ, ಉತ್ತಮ ಫಲಿತಾಂಶ ಪಡೆದು, ಜೀವನದಲ್ಲಿ ನಿಗದಿ ಪಡಿಸಿಕೊಂಡ ಗುರಿ ತಲುಪಲು ಶ್ರಮಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ನಾಜಿಯಾ ಸುಲ್ತಾನ ಮಾತನಾಡಿ, ಛಲದಿಂದ ವಿದ್ಯಾಭ್ಯಾಸ ಮಾಡಿ ನಾನಿಂದು ಕೆ.ಎ.ಎಸ್. ಅಧಿಕಾರಿಯಾಗಿದ್ದೆನೆ, ಯಾವುದೇ ಹೆಣ್ಣು ಮಕ್ಕಳು ಹಿಂಜರಿಕೆಯಿಲ್ಲದೇ ಗುರಿಯಿಟ್ಟುಕೊಂಡು ಶ್ರಮವಹಿಸಿ ಪ್ರಯತ್ನಿಸಿದಾಗ ಯಶಸ್ಸು ದೊರೆಯುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಹ್ಮದ್ ಇಸ್ಮಾಯಿಲ್ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎಚ್.ಗೋನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್‍ನ ಹಾಗೂ ನ್ಯಾಯಾಲಯದ ವಿವಿಧ ಶಾಖೆಗಳನ್ನು ಪರಿಚಯ ಮಾಡಿಕೊಡಲಾಯಿತು.